ಗ್ವಾಡ್ಲೂಪ್ - 
ಪೂರ್ವ ಕ್ಯಾರಿಬಿಯನ್ ಸಮುದ್ರದ ಲೀವರ್ಡ್ ದ್ವೀಪ ಸಮೂಹದಲ್ಲಿ ಫ್ರೆಂಚ್ ಅಂಟಿಲೀಸಿನ ಅತ್ಯಂತ ವಿಸ್ತಾರವಾದ ಪ್ರದೇಶ ; ಎರಡು ದ್ವೀಪಗಳನ್ನೊಳಗೊಂಡಿದೆ. ಉ. ಅ. 160 15'  ಮತ್ತು ಪ. ರೇ. 610   35'  ಮೇಲಿದೆ. ಪಶ್ಚಿಮದ ಬಾಸ್ ಟೇರ್ ದ್ವೀಪಕ್ಕೂ ಪೂರ್ವದ ಗ್ರ್ಯಾಂಡ್ ಟೇರ್ ದ್ವೀಪಕ್ಕೂ ನಡುವೆ ಜವುಗೂ ರಿವ್ಯೇರ್ ಸಾಲೀ ಎಂಬ ಕಿರಿ ಜಲ ಸಂಧಿಯೂ ಇವೆ. ಈ ದ್ವೀಪಗಳ ಪೂರ್ವ ಮತ್ತು ದಕ್ಷಿಣಗಳಲ್ಲಿ ಸ್ವಲ್ಪ ದೂರದಲ್ಲಿ ಮೇರೀ ಗಲಾಂಟ್, ಲಾ ಡೆಸಿರೇಡ್, ಈಲ್ಸ್ ದ ಸೇಂಟ್ಸ್, ಈಲ್ಸ್ ದ ಲ ಪೆಟಿಲ್ ಟೇರ್ ಎಂಬ ದ್ವೀಪಗಳಿವೆ. ಇವುಗಳಲ್ಲಿ ಮೊದಲ ಎರಡು ಸಣ್ಣವು, ಉಳಿದವು ಪುಟ್ಟವು. ವಾಯುವ್ಯದಲ್ಲಿ 130 ಮೈ. ದೂರದಲ್ಲಿ ಸ್ಯಾಂಟ್ ಬಾರ್ಟೇಲ್ಮೀ ದ್ವೀಪವೂ 140 ಮೈ. ದೂರದಲ್ಲಿ ಸೆಂಟ್ ಮಾರ್ಟಿನ್ ದ್ವೀಪವೂ ಇವೆ. ಸೇಂಟ್ ಮಾರ್ಟಿನ್ ದ್ವೀಪದ ಉತ್ತರ ಭಾಗವೂ ಉಳಿದೆಲ್ಲ ದ್ವೀಪಗಳೂ ಗ್ವಾಡ್ಲೂಪಿಗೆ ಅಧೀನವಾಗಿವೆ. ಒಟ್ಟು ವಿಸ್ತೀರ್ಣ 687 ಚ. ಮೈ.

ಪಶ್ಚಿಮ ಮತ್ತು ಪೂರ್ವ ದ್ವೀಪಗಳ ಮೇಲ್ಮೈ ಲಕ್ಷಣದಲ್ಲಿ ಬಹಳ ವ್ಯತ್ಯಾಸವಿದೆ. ಬಾಸ್ ಟೇರ್ ದ್ವೀಪದಲ್ಲಿ ದಿಣ್ಣೆಗಳೂ ಮಧ್ಯದಲ್ಲಿ ಜ್ವಾಲಾಮುಖಿಗಳ ಮೊನಚಾದ ಗುಡ್ಡಗಳೂ ಇವೆ. ದಕ್ಷಿಣಕ್ಕೆ ಹೋದಂತೆ ಈ ಗುಡ್ಡಗಳ ಎತ್ತರ ಹೆಚ್ಚಿ ಸೂಫ್ರೀಯೇರದಲ್ಲಿ ಪರ್ಯವಸಾನವಾಗುತ್ತದೆ. ಇದು ಲೆಸ್ಸರ್ ಆಂಟಿಲೀಸಿನಲ್ಲೇ ಅತ್ಯುನ್ನತ ಪರ್ವತ. ಇದೊಂದು ಅಗ್ನಿಪರ್ವತ; 1797 ಮತ್ತು 1836 ರಲ್ಲಿ ಸ್ಫೋಟಿಸಿತ್ತು. ಪೂರ್ವಕ್ಕಿಂತ ಪಶ್ಚಿಮ ಕರಾವಳಿಯ ಕಡೆಗೆ ಪರ್ವತದ ಇಳಿಜಾರು ಹೆಚ್ಚು ಕಡಿದು. ಗ್ರ್ಯಾಂಡ್ ಟೇರ್‍ನಲ್ಲಿ ಭೂಮಿ ಮಟ್ಟಸವಾಗಿದೆ. ಇಲ್ಲೆಲ್ಲೂ ಎತ್ತರದ ಗುಡ್ಡ ಬೆಟ್ಟಗಳಿಲ್ಲ. ಇಲ್ಲಿಯದು ಸುಣ್ಣ ಕಲ್ಲು ನೆಲ. ಮೇರೀ ಗಲಾಂಟ್, ಲಾ ಡೆಸಿರೆಡ್‍ಗಳ ನೆಲವೂ ಇದೇ ರೀತಿ ಇದೆ. ಬಾಸ್ ಟೇರ್ ಪರ್ವತದ ಇಳುಕಲಿನಲ್ಲಿ ಅನೇಕ ತೊರೆಗಳು ಹರಿಯುತ್ತವೆ. ಆದರೆ ಗ್ರ್ಯಾಂಡ್ ಟೇರ್‍ನಲ್ಲಿರುವ ತೊರೆಗಳು ಕೆಲವು ಮಾತ್ರ.

ಈ ದ್ವೀಪಗಳ ಕ್ಷೇತ್ರ ಚಿಕ್ಕದಾಗಿದ್ದರೂ ವಾಯುಗುಣದಲ್ಲಿ ವ್ಯತ್ಯಾಸಗಳುಂಟು. ಬೇಸಗೆಯ (ಜೂನ್) ಸರಾಸರಿ ಗರಿಷ್ಠ ಉಷ್ಣತೆ 820 ಫ್ಯಾ. (280   ಸೆಂ.). ಆದರೆ ಚಳಿಗಾಲದ (ಜನವರಿ) ಸರಾಸರಿ ಕನಿಷ್ಠ ಉಷ್ಣತೆ 750 ಫ್ಯಾ. (240   ಸೆಂ.).

ಗ್ರ್ಯಾಂಡ್ ಟೇರಿನಲ್ಲಿ ವರ್ಷಕ್ಕೆ 40" (100 ಸೆಂ. ಮೀ. ) ಮಳೆಯಾಗುತ್ತದೆ. ಜನವರಿ - ಮೇ ಶುಷ್ಕ. ಆದರೆ ಬಾಸ್ ಟೇರಿನಲ್ಲಿ ವಾರ್ಷಿಕ ಮಳೆ 100" ಗಿಂತ (250 ಸೆಂ. ಮೀ.) ಅಧಿಕ. ಇದು ವಾಣಿಜ್ಯ ಮಾರುತಗಳ ಮಾರ್ಗದಲ್ಲಿದೆ. ಇಲ್ಲಿ ಜುಲೈ- ಸಪ್ಟೆಂಬರ್ ಮಳೆಗಾಲ.

ಸಸ್ಯಪ್ರಾಣಿ ಜೀವನ: ಈ ದ್ವೀಪಗಳ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಸಸ್ಯಪ್ರಾಣಿ ಜೀವನದಲ್ಲೂ ಹೆಚ್ಚಿನ ವ್ಯತ್ಯಾಸವುಂಟು. ಬಾಸ್ ಟೇರಿನ ಪರ್ವತಗಳಲ್ಲಿ ದಟ್ಟವಾದ ಕಾಡುಗಳುಂಟು. ಗ್ರ್ಯಾಂಡ್ ಟೇರಿನಲ್ಲಿ ಅಲ್ಲಲ್ಲಿ ಕುರುಚಲು ಕಾಡುಗಳುಂಟು. ರಿವ್ಯೇರ್ ಸಾಲೀಯ ಬಳಿ ಕ್ಷಾರಸಸ್ಯಗಳು (ಮ್ಯಾಂಗ್ರೌ) ಇವೆ.

ಐರೋಪ್ಯ ಜನವಸತಿ ಆರಂಭವಾದಂದಿನಿಂದ ಇಲ್ಲಿಯ ಪ್ರಾಣಿ ಜೀವನದಲ್ಲಿ ಹೆಚ್ಚು ಬದಲಾವಣೆಯಾಗಿದೆ. ಹಲವು ಹೊಸಜಾತಿಗಳನ್ನು ಇಲ್ಲಿಗೆ ಪ್ರಾಣಿ ಜೀವನದಲ್ಲಿ ಹೆಚ್ಚು ಬದಲಾವಣೆಯಾಗಿದೆ. ಹಲವು ಹೊಸಜಾತಿಗಳನ್ನು ಇಲ್ಲಿಗೆ ತರಲಾಗಿದೆ. ಹಳೆಯವೆಷ್ಟೋ ಮರೆಯಾಗಿವೆ. ಇಲಿಗಳನ್ನು ಇಂಡಿಯನ್ ಮುಂಗುಸಿಯನ್ನು ಇಲ್ಲಿಗೆ 1880 ರಲ್ಲಿ ತರಲಾಯಿತು. ಆದರೆ ಇದು ಹಕ್ಕಿ, ಹಲ್ಲಿ, ಹಾವು ಮುಂತಾದ ಹಲವು ಜಾತಿಯ ಸ್ಥಳೀಯ ಪ್ರಾಣಿಗಳನ್ನೂ ಸಸ್ತನಿಗಳನ್ನೂ ನಾಶಪಡಿಸುತ್ತಿದೆ. ಕಾಡುಗಳನ್ನು ಕಡಿಯುವುದರಿಂದಲೂ ಬೇಟೆಯಿಂದಲೂ ಹಲವು ಹಕ್ಕಿಗಳೂ ಪ್ರಾಣಿಗಳೂ ಕಣ್ಮರೆಯಾಗುತ್ತಿವೆ.
ಇತಿಹಾಸ : ಕೊಲಂಬಸ್ ಬರುವುದಕ್ಕೆ (1493) ಪೂರ್ವದಲ್ಲಿ ಇಲ್ಲಿ ಕ್ಯಾರಿಬ್ ಜನ ವಾಸಿಸುತ್ತಿದ್ದರು. ಇವರು ದಕ್ಷಿಣ ಅಮೆರಿಕದಿಂದ ಬಂದವರು. ತಮಗಿಂತ ಹಿಂದೆ ಇದ್ದವರ ಸ್ಥಾನದಲ್ಲಿ ಇವರಿದ್ದರು. ಸ್ಪ್ಯಾನಿಷ್ ವಲಸೆಗಾರರು 1635 ರಿಂದ ಕ್ಯಾರಿಬರನ್ನು ಓಡಿಸಲಾರಂಭಿಸಿದರು. 1674 ರಲ್ಲಿ ಈ ದ್ವೀಪಗಳು ಫ್ರೆಂಚರಿಗೆ ಸೇರಿದುವು. 17 ನೆಯ 18 ನೆಯ ಶತಮಾನಗಳಲ್ಲಿ ಇಂಗ್ಲಿಷರು ಈ ದ್ವೀಪಗಳ ಮೇಲೆ ಹಲವು ಬಾರಿ ದಾಳಿ ಮಾಡಿದರು. 1759 - 1763 ರಲ್ಲಿ ಮತ್ತು 1794 ರಲ್ಲಿ ಇದು ಅವರ ವಶವಾಗಿತ್ತು. ಅವರು ಇದನ್ನು 1810 ರಲ್ಲಿ ಮತ್ತೆ ವಶಪಡಿಸಿಕೊಂಡಿದ್ದು, 1816 ರಲ್ಲಿ ಫ್ರೆಂಚರಿಗೆ ಹಿಂದಿರುಗಿಸಿದರು.

ಜನಜೀವನ : 17, 18 ನೆಯ ಶತಮಾನದಲ್ಲಿ ವಲಸೆ ಬಂದ ಫ್ರೆಂಚರಿಂದಲೂ ಅವರು ತರಿಸಿಕೊಂಡ ನೀಗ್ರೋ ಗುಲಾಮರಿಂದಲೂ ಇಲ್ಲಿ ಜನಸಂಖ್ಯೆ ಬೆಳೆಯಿತು. ಗುಲಾಮಗಿರಿ ರದ್ದಾದ ಮೇಲೆ ಭಾರತ, ಸಿರಿಯ ಮತ್ತು ಇತರ ಎಡೆಗಳಿಂದ ಕಾರ್ಮಿಕರೂ ಕುಶಲಿಗಳೂ ವ್ಯಾಪಾರಿಗಳೂ ಇಲ್ಲಿಗೆ ಬಂದರು. ವಿವಿಧ ವರ್ಣಗಳ ಜನ ಇಲ್ಲಿದ್ದಾರೆ. ಬಿಳಿಯರ ಮತ್ತು ವರ್ಣೀಯರ ಸಂಮಿಶ್ರ ಜನಾಂಗವೊಂದು ಬೆಳೆಯುತ್ತಿದೆ. ಒಟ್ಟು ಜನಸಂಖ್ಯೆ 2,83,223 (1972). ರಾಜಧಾನಿ ಪ್ವಾನ್-ಟ್ಯಾ-ಪೀಟರ್ (27,737).

ಆಡಳಿತ: ಗ್ವಾಡ್ಲೂಪ್‍ಗೆ 1946 ರಲ್ಲಿ ಫ್ರಾನ್ಸಿನ ಸಾಗರಾಂತರ ವಿಭಾಗದ ಸ್ಥಾನ ಲಭ್ಯವಾಯಿತು. ಆಡಳಿತಾಂಗದ ಅಧಿಪತಿ ಪ್ರಿಫೆಕ್ಟ್.. ಇವನ ಅಧೀನದಲ್ಲಿ ಅಧಿಕಾರಿಗಳಿದ್ದಾರೆ. ವಿಧಾನಾಧಿಕಾರ 36 ಸದಸ್ಯರ ಸಾಮಾನ್ಯ ಪರಿಷತ್ತಿನದು. ಇದಕ್ಕೆ ಚುನಾವಣೆ ನಡೆಯುತ್ತದೆ. 1960 ರ ದಶಕದ ಆದಿಯಲ್ಲಿ ಸರ್ಕಾರ 3 ಸೆಕೆಂಡರಿ ಶಾಲೆಗಳನ್ನೂ 190 ಪ್ರಾಥಮಿಕ ಶಾಲೆಗಳನ್ನೂ ನಡೆಸುತ್ತಿತ್ತು. ಸೆಕೆಂಡರಿ ಶಿಕ್ಷಣ ಉಚಿತ.

 ಆರ್ಥಿಕತೆ: ಇದು ವ್ಯವಸಾಯಪ್ರಧಾನ ದೇಶ. ಕಬ್ಬು ಮುಖ್ಯ ಬೆಳೆ. ಸಕ್ಕರೆ ಮತ್ತು ರಂ ಮುಖ್ಯ ನಿರ್ಯಾತಗಳು. ಗ್ರ್ಯಾಂಡ್ ಟೇರ್‍ನಲ್ಲಿ ವಿಶೇಷವಾಗಿ ಕಬ್ಬು ಬೆಳೆಯುತ್ತದೆ. ಪ್ವಾನ್-ಟ್ಯಾ-ಪೇಟರ್, ಲ ಮೂಲ್, ಸ್ಯಾನ್ ಆನ್ - ಈ ಸ್ಥಳಗಳಲ್ಲಿ ಸಕ್ಕರೆ ಕಾರ್ಖಾನೆಗಳಿವೆ. ಬಾಸ್ ಟೇರ್ ದ್ವೀಪದಲ್ಲೂ ಮೇರೀ ಗಲಾಂಟಿನ ಗ್ರಾಂಡ್ ಆನ್ಸ್‍ನಲ್ಲೂ ಸಕ್ಕರೆ ಕಾರ್ಖಾನೆಗಳಿವೆ. ಬಾಳೆಹಣ್ಣು ಇನ್ನೊಂದು ನಿರ್ಯಾತ ವಸ್ತು. ಇಲ್ಲಿಯ ಇತರ ಬೆಳೆಗಳು ಕಾಫಿ, ಕೋಕೋ, ವ್ಯಾನಿಲ, ಪೈನಾಪಲ್, ಸಿಟ್ರಸ್ ಹಣ್ಣು. ಜೀವನೋಪಾಯಕ್ಕಾಗಿ ಧಾನ್ಯ ಬೆಳೆಯುತ್ತಾರೆ; ದನ ಸಾಕುತ್ತಾರೆ. ಬಾಸ್ ಟೇರ್ ಕಾಡು ದುರ್ಗಮವಾಗಿರುವುದರಿಂದ ಅದನ್ನು ಕಡಿಯುವುದಾಗಿಲ್ಲ. ಮರ ಆಮದಾಗುತ್ತದೆ. ಉಪ್ಪು ಮತ್ತು ಗಂಧಕ ಅಲ್ಪ ಪರಿಮಾಣಗಳಲ್ಲಿ ಸಿಗುತ್ತದೆ.

ಫ್ರಾನ್ಸ್ ಮತ್ತು ಉತ್ತರ ಅಮೆರಿಕದಿಂದ ಬರುವ ಹಡಗುಗಳು ಈ ದ್ವೀಪಗಳ ಬಂದರುಗಳಿಗೆ ಬಂದೇ ಹೋಗುತ್ತವೆ. ಫ್ರಾನ್ಸ್, ಸಂಯುಕ್ತ ಸಂಸ್ಥಾನಗಳು, ಬ್ರಿಟನ್ ಮತ್ತು ಹಾಲೆಂಡ್ ವಿಮಾನಗಳು ಇಲ್ಲಿಯ ವಿಮಾನ ನಿಲ್ದಾಣಗಳಿಗೆ ಬರುತ್ತವೆ. ಈ ದ್ವೀಪಗಳ ಬೇರೆ ಬೇರೆ ಭಾಗಗಳ ನಡುವೆ ಸಣ್ಣ ಹಡಗುಗಳು ಸಂಚರಿಸುತ್ತವೆ. ಮುಖ್ಯ ದ್ವೀಪದಲ್ಲಿ ಸು. 450 ಮೈ. ರಸ್ತೆಗಳುಂಟು.
(ವಿ.ಎಸ್.ಬಿ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ